ಕ್ವಿಬೆಕ್ ಇತಿಹಾಸ	
	
ಕ್ವಿಬೆಕ್ ಪ್ರದೇಶ ಮೊಟ್ಟಮೊದಲಿಗೆ ಬಿಳಿಯರ ಗಮನಕ್ಕೆ ಬಂದದ್ದು 1535ರಲ್ಲಿ. ಈಗ ಕ್ವಿಬೆಕ್ ನಗರ ಇರುವ ಸ್ಥಳದಲ್ಲಿ ಜಾóಕ್ ಕಾಟ್ರ್ಯೇ ಎಂಬ ಫ್ರೆಂಚ್ ಅನ್ವೇಷಕನೊಬ್ಬ ಆಗ ಚಳಿಗಾಲವನ್ನು ಕಳೆದಿದ್ದ. ಮತ್ತೆ 1608ರಲ್ಲಿ ಸ್ಯಾಮ್ಯುಯೆಲ್ ಡ ಷಾಂಪ್ಲೇನ್ ಅಲ್ಲಿ ಒಂದು ವಸಾಹತನ್ನು ಸ್ಥಾಪಿಸಿದ. ಫ್ರಾನ್ಸಿನ ಸರಕಾರದ ಸನ್ನದು ಪಡೆದಿದ್ದ ಕೆಲವು ವ್ಯಾಪಾರ ಸಂಸ್ಥೆಗಳು ಆ ಪ್ರದೇಶದಲ್ಲಿ ಕಾರ್ಯನಿರತವಾಗಿದ್ದರೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ. ಜನಸಂಖ್ಯೆ ವಿರಳವಾಗಿತ್ತು. 1663ರಲ್ಲಿ ಆ ಪ್ರದೇಶದ ಆಡಳಿತ ಫ್ರಾನ್ಸಿನ ಕೇಂದ್ರ ಸರ್ಕಾರಕ್ಕೆ ಸೇರಿದಾಗ ವಸಾಹತು ನೀತಿಗೆ ಉತ್ತೇಜನ ಲಭ್ಯವಾಯಿತು. ಆದರೂ ಸರ್ಕಾರ ಆ ಪ್ರದೇಶಕ್ಕೆ ಹೆಚ್ಚಿನ ಗಮನಕೊಡಲಿಲ್ಲ. 14ನೆಯ ಲೂಯಿಯ ಮತ್ತು ಅವನ ದಕ್ಷ ಸಚಿವ ಷಾóನ್ ಬ್ಯಾಟಿಸ್ಟ್ ಕಾಲ್ಬಾರನ ನೇತೃತ್ವದಲ್ಲಿ ಆ ಪ್ರದೇಶ ರೋಮನ್ ಕ್ಯಾಥೊಲಿಕ್ ಕೇಂದ್ರವೂ ಶ್ರೀಮಂತ ಜಮೀನ್ದಾರಿ ಪದ್ಧತಿಗೆ ಸೇರಿದ ಕೃಷಿಪ್ರಧಾನ ಪ್ರಾಂತ್ಯವೂ ಆಗಿ ಮುನ್ನಡೆಯಿತು.

ಕ್ವಿಬೆಕ್ ಪ್ರಾಂತ್ಯದಲ್ಲಿ ನೆಲಸಿದ ಜನ ಮಾತೃರಾಷ್ಟ್ರವಾದ ಫ್ರಾನ್ಸಿನ ನಿಷ್ಠಾವಂತ ಪ್ರಜೆಗಳಾಗಿದ್ದರು. ಫ್ರಾನ್ಸಿನ ಚಕ್ರವರ್ತಿಯಿಂದ ನೇಮಿತವಾದ ಗವರ್ನರ್ ಮತ್ತು ಆ ದೇಶದ ಚರ್ಚಿನ ಅಧಿಕಾರಿಗಳು ಸಮಾಜದ ಹಿತಾಸಕ್ತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತ ನಿರ್ವಹಿಸುತ್ತಿದ್ದರು. ಕ್ವಿಬೆಕ್‍ನ ಬಿಷಪ್ ಮತ್ತು ಜೆಸ್ಯುಯಿಟ್ ಪಾದ್ರಿಗಳು ತೀವ್ರವಾದ ಮತಪ್ರಚಾರ ಕಾರ್ಯ ನಡೆಸುತ್ತಿದ್ದರು. ಪ್ರಾಂತ್ಯದ ಸ್ವಯಮಾಡಳಿತದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರದ ವ್ಯಾಪಾರಿವರ್ಗದ ಆರ್ಥಿಕ ನೀತಿಗೆ ಪ್ರಾಮುಖ್ಯವಿದ್ದುದರಿಂದ ಸರ್ಕಾರದ ಆಡಳಿತಕ್ಕೆ ಅಡ್ಡಿಯುಂಟಾಗುತ್ತಿರಲಿಲ್ಲ. ನೆರೆಹೊರೆಯ ಪ್ರದೇಶಗಳಲ್ಲಿದ್ದ ಆದಿವಾಸಿ ಇಂಡಿಯನರಿಗೂ ಇಂಗ್ಲಿಷ್ ವಸಾಹತುಗಳ ಜನರಿಗೂ ಸತತವಾಗಿ ಕದನಗಳು ನಡೆಯುತ್ತಿದ್ದುದರಿಂದ ಶಾಂತಿಯಿರಲಿಲ್ಲ. ಇಷ್ಟಾದರೂ ಕ್ರಮೇಣ ಕ್ವಿಬೆಕಿನ ಫ್ರೆಂಚ್ ವಸಾಹತು ಬಲಗೊಳ್ಳುತ್ತಿತ್ತು. ಫ್ರಾನ್ಸ್-ಬ್ರಿಟನ್‍ಗಳ ನಡುವೆ ನಡೆದ ಯುದ್ಧದಲ್ಲಿ ಬ್ರಿಟಿಷ್ ದಳಪತಿ ಜೇಮ್ಸ್ ವುಲ್ಫ್ ಕ್ವಿಬೆಕನ್ನು ವಶಪಡಿಸಿಕೊಂಡ (1759). 1763ರ ಪ್ಯಾರಿಸ್ ಶಾಂತಿ ಸಂಧಾನದಿಂದಾಗಿ ಕ್ವಿಬೆಕ್ ಪ್ರಾಂತ್ಯ ಬ್ರಿಟನಿನ ವಶವಾಯಿತು. ಇಲ್ಲಿಯ ಪ್ರಜೆಗಳು ಬಹಳಮಟ್ಟಿಗೆ ಫ್ರೆಂಚರಾಗಿದ್ದುದರಿಂದ ಬ್ರಿಟಿಷರ ದೆಸೆಯಿಂದ ಜನಜೀವನ ಮತ್ತು ಸಾಮಾಜಿಕ ರಂಗಗಳಲ್ಲಿ ಮಹತ್ತ್ವದ ಬದಲಾವಣೆಗಳುಂಟಾದುವು. ವ್ಯಾಪಾರಕ್ಕೆ ಪ್ರಾಮುಖ್ಯ ನೀಡಿದ ಬ್ರಿಟಿಷ್ ವರ್ತಕರಿಗೂ ವ್ಯವಸಾಯವೇ ಮುಖ್ಯ ಕಸಬಾಗಿದ್ದ ಫ್ರೆಂಚ್ ರೈತವರ್ಗಕ್ಕೂ ನಡುವೆ ಸಂಪರ್ಕ ಏರ್ಪಡಲಿಲ್ಲ. ಫ್ರೆಂಚ್ ಭಾಷೆ, ಸಂಸ್ಕøತಿ ಮತ್ತು ರೋಮನ್ ಕ್ಯಾಥೊಲಿಕ್ ಮತಗಳ ರಕ್ಷಣೆಗಾಗಿ ಅಂದಿನಿಂದ ಈಗಿನವರೆಗೂ ಎರಡು ಶತಮಾನಗಳ ಕಾಲ ಇದು ಹೋರಾಟ ನಡೆಸಿದೆ. ಮೊದಲಿಗೆ ತಮ್ಮ ಜೀವನರೀತಿ, ಸಂಸ್ಕøತಿಗಳಿಗೆ ಪ್ರಾಧಾನ್ಯ ದೊರಕಿಸಿಕೊಳ್ಳಲು ಬ್ರಿಟಿಷರು ಪ್ರಯತ್ನಿಸಿದರಾದರೂ 1774ರ ಕ್ವಿಬೆಕ್ ಮಸೂದೆಯ ಪ್ರಕಾರ ಫ್ರೆಂಚ್ ಜನತೆಯ ಬೇಡಿಕೆಗಳಿಗೆ ಮಾನ್ಯತೆ ನೀಡಿದರು. ಆ ಸುಮಾರಿನಲ್ಲಿ ನಡೆದ ಅಮೆರಿಕ ಸ್ವಾತಂತ್ರ್ಯ ಯುದ್ಧ ಮತ್ತು ಫ್ರಾನ್ಸಿನ ಮಹಾಕ್ರಾಂತಿ ಕ್ವಿಬೆಕಿನ ಜನತೆಯ ಮೇಲೆ ಹೆಚ್ಚಿನ ಪ್ರಭಾವ ಬೀರಲಿಲ್ಲ. 
ಪ್ರಾತಿನಿಧಿಕ ಸರ್ಕಾರ ಇವರಿಗೆ ದೊರಕಿದ್ದು ಕೂಡ ಒಂದು ಆಕಸ್ಮಿಕವೆಂದೇ ಹೇಳಬೇಕು. ಅಮೆರಿಕನ್ ಸ್ವಾತಂತ್ರ್ಯ ಯುದ್ಧದ ಕಾಲದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ನಿಷ್ಠಾವಂತರಾಗಿದ್ದು ಅನಂತರ ಬ್ರಿಟಿಷರ ಆಶ್ರಯದಲ್ಲಿ ಉಳಿಯುವ ಸಲುವಾಗಿ ಕ್ವಿಬೆಕ್ ಪ್ರದೇಶಕ್ಕೆ ಬಂದು ನೆಲಸಿದ ಜನ ಅದಕ್ಕಾಗಿ ಚಳವಳಿ ನಡೆಸಿದರು. ಅದರ ಫಲವಾಗಿ 1791ರ ಸಂವಿಧಾನ ಕಾಯಿದೆ ಸ್ವೀಕೃತವಾಗಿ, ಉತ್ತರ ಕೆನಡ (ಈಗಿನ ಆಂಟೇರಿಯೋ) ಮತ್ತು ದಕ್ಷಿಣ ಕೆನಡ (ಈಗಿನ ಕ್ವಿಬೆಕ್) ಎಂಬ ಎರಡು ಘಟಕಗಳು ಅಸ್ತಿತ್ವಕ್ಕೆ ಬಂದುವು. ಉತ್ತರದಲ್ಲಿ ಬ್ರಟಿಷ್ ವಸಾಹತುದಾರರೂ ದಕ್ಷಿಣದಲ್ಲಿ ಫ್ರೆಂಚ್ ಕೆನಡದ ಜನರೂ ಅಧಿಕ ಸಂಖ್ಯೆಯಲ್ಲಿದ್ದರು. ಉತ್ತರ ಕೆನಡಕ್ಕೊಂದು, ದಕ್ಷಿಣ ಕೆನಡಕ್ಕೊಂದು-ಹೀಗೆ ಎರಡು ವಿಧಾನಸಭೆಗಳ ಸ್ಥಾಪನೆಯಾಯಿತು. ದಕ್ಷಿಣ ಕೆನಡದ ವಿಧಾನಸಭೆಯಲ್ಲಿ ಮೊದಲಿಂದಲೂ ಫ್ರೆಂಚ್ ರೋಮನ್ ಕ್ಯಾಥೊಲಿಕರದೇ ಬಹುಮತವಿತ್ತು. ಅದು ತನ್ನದೇ ಆದ ದೃಷ್ಟಿಯನ್ನು ರೂಢಿಸಿಕೊಂಡಿತು. ಈ ಹೋರಾಟದಲ್ಲಿ ಫ್ರೆಂಚ್ ಕೆನಡದ ಮಧ್ಯಮವರ್ಗದ ಜನ ಪ್ರಾಧಾನ್ಯ ಗಳಿಸಿದರು. ಈ ವರ್ಗಕ್ಕೂ ಆಡಳಿತವರ್ಗಕ್ಕೂ ಸ್ವಲ್ಪಕಾಲ ಹೋರಾಟ ನಡೆಯುತ್ತಿತ್ತು. ಎರಡೂ ವಿಭಾಗಗಳಲ್ಲೂ 1837ರಲ್ಲಿ ಆಡಳಿತದ ವಿರುದ್ಧ ನಡೆದ ದಂಗೆ ಸಫಲವಾಗಲಿಲ್ಲ.

ಕ್ವಿಬೆಕಿನ ಜನತೆಯ ಸಮಸ್ಯೆಗಳನ್ನು ಪರಿಶೀಲಿಸಿದ ಗವರ್ನರ್ ಲಾರ್ಡ್ ಡರ್‍ಹ್ಯಾಮ್ ಈ ಸಮಸ್ಯೆಗಳ ಪರಿಹಾರಕ್ಕೆ ಎರಡು ಮಾರ್ಗಗಳನ್ನು ಸೂಚಿಸಿದ. ಉತ್ತರ ಮತ್ತು ದಕ್ಷಿಣ ಕೆನಡಗಳನ್ನು ಒಂದುಗೂಡಿಸಿ, ಫ್ರೆಂಚ್ ಮೂಲದ ನಿವಾಸಿಗಳನ್ನು ಅಲ್ಪಸಂಖ್ಯಾತರಾಗುವಂತೆ ಮಾಡಿ ಅವರಿಂದ ಬರುತ್ತಿದ್ದ ಆತಂಕಗಳನ್ನು ನಿವಾರಿಸುವುದು ಮತ್ತು ಹೊಸ ಒಕ್ಕೂಟಕ್ಕೆ ಜವಾಬ್ದಾರಿ ಸರ್ಕಾರ ನೀಡುವುದು-ಇವು ಆತನ ಸಲಹೆಗಳು. ಇವುಗಳ ಪ್ರಕಾರ ಎರಡು ಪ್ರದೇಶಗಳನ್ನೂ ಒಡನೆಯೇ ಒಂದು ಗೂಡಿಸಲಾಯಿತಾದರೂ ಜವಾಬ್ದಾರಿ ಸರ್ಕಾರವನ್ನು ಕೊಡಲಿಲ್ಲ. ಒಂದು ದಶಕದ ಹೋರಾಟದ ತರುವಾಯ ಜವಾಬ್ದಾರಿ ಸರ್ಕಾರ ಪದ್ಧತಿಯನ್ನು ಜಾರಿಗೆ ತರಲಾಯಿತು. 1867ರಲ್ಲಿ ಬ್ರಿಟಿಷ್ ಉತ್ತರ ಅಮೆರಿಕದ ಉತ್ತರ ಕೆನಡ, ದಕ್ಷಿಣ ಕೆನಡ, ನೋವ ಸ್ಕೋಷ ಮತ್ತು ನ್ಯೂ ಬ್ರನ್ಸ್‍ವಿಕ್ ಪ್ರಾಂತ್ಯಗಳ ಒಕ್ಕೂಟ ರಚಿಸಲಾಯಿತು. ಈ ವ್ಯವಸ್ಥೆಯಿಂದ ಫ್ರೆಂಚ್ ಮೂಲದ ಕೆನಡದ ಜನತೆಗೆ ಒಂದು ಪ್ರಾಂತ್ಯದ ಮೇಲೆ ಹಿಡಿತ ಸಿಕ್ಕಿದಂತಾಯಿತು. ಕ್ವಿಬೆಕ್ ಪ್ರಾಂತ್ಯದಲ್ಲಿ ಅವರಿಗೆ ಬಹುಮತವಿದ್ದುದರಿಂದ ತಮ್ಮ ಸಂಸ್ಕøತಿ, ಭಾಷೆ ಮತ್ತು ಮತೀಯ ಭಾವನೆಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು. ಇತರ ಪ್ರಾಂತ್ಯಗಳೊಂದಿಗೆ ತಮ್ಮ ದೇಶದ ವಿಸ್ತರಣ ಮತ್ತು ಅಧಿಕ ವ್ಯಾಪಾರ ಸೌಲಭ್ಯಗಳ ಬಗ್ಗೆಯೂ ಇವರು ಪ್ರಯತ್ನ ನಡೆಸಿದರು.

ಕಾಲಕ್ರಮದಲ್ಲಿ ಕ್ವಿಬೆಕ್ ಪ್ರಾಂತ್ಯ ತನ್ನ ವೈಶಿಷ್ಟ್ಯವನ್ನು ಬೆಳೆಸಿಕೊಂಡು ಉಳಿದೆಲ್ಲ ಪ್ರಾಂತ್ಯಗಳಿಗಿಂತಲೂ ಪ್ರಾಧಾನ್ಯ ಪಡೆಯಿತು. ವಿಲ್ಫ್ರಿಡ್ ಲಾರಿಯೇ 1869ರಿಂದ 1911ರ ವರೆಗೆ ಕೆನಡದ ಪ್ರಧಾನಿಯಾಗಿದ್ದ. 1948 ರಿಂದ 1957ರ ವರೆಗೆ ಪ್ರಧಾನಿಯಾಗಿದ್ದ ಲೂಯಿ ಸಾನ್ ಲೊರಾನ್ ಕ್ವಿಬೆಕಿನವನು. ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳನ್ನಾಡುತ್ತಿದ್ದ ಜನರಲ್ಲಿ ಏರ್ಪಟ್ಟಿದ್ದ ಭಿನ್ನ ಮನೋಭಾವದಿಂದಾಗಿ ಫ್ರೆಂಚ್ ಮೂಲದ ಜನ ಕ್ವಿಬೆಕ್ ತಮ್ಮ ವಿಶಿಷ್ಟವಾದ ತಾಯ್ನಾಡೆಂದು ಭಾವಿಸುವಂತಾಯಿತು. ಶಿಕ್ಷಣ ಮಾಧ್ಯಮ, ಹೊರದೇಶಗಳಲ್ಲಿ ಬ್ರಿಟಿಷರು ನಡೆಸುತ್ತಿದ್ದ ಯುದ್ಧಗಳಲ್ಲಿ ಕೆನಡದ ಪಾತ್ರ-ಇವೆರಡು ವಿಷಯಗಳಲ್ಲಿ ಕ್ವಿಬೆಕಿನ ಜನರು ಸರ್ಕಾರದೊಂದಿಗೆ ಒಮ್ಮತ ಹೊಂದಿರಲಿಲ್ಲ. ದಕ್ಷಿಣ ಆಫ್ರಿಕದೊಂದಿಗೆ ಬ್ರಿಟಿಷರು ನಡೆಸುತ್ತಿದ್ದ ಯುದ್ಧದ ನೆರವಿಗೆ ಕೆನಡದ ಸ್ವಯಂಸೇವಕ ರಕ್ಷಣ ತಂಡವನ್ನು ಕಳುಹಿಸಿದ್ದರ ವಿರುದ್ಧ ಆಂದೋಳನವೆದ್ದಿತು. ಮತ್ತೆ ಒಂದನೆಯ ಮತ್ತು ಎರಡನೆಯ ಮಹಾಯುದ್ಧಗಳ ಕಾಲದಲ್ಲಿ ಬ್ರಿಟಿಷರ ಪರವಾಗಿ ಸೈನ್ಯ ಕಳುಹಿಸಿದಾಗ ವಿರೋಧ ತೀವ್ರವಾಯಿತು. ಈ ರೀತಿ ಅನೇಕ ವಿಷಯಗಳಲ್ಲಿ ಕೆನಡ ದೇಶದಲ್ಲಿ ಕ್ವಿಬೆಕ್ ತನ್ನ ಪ್ರತ್ಯೇಕ ಧೋರಣೆಯನ್ನು ತೋರಿಸಿಕೊಂಡಿದೆ. 
ಆದರೂ ಕ್ವಿಬೆಕ್ ಪ್ರಾಂತ್ಯದ ಪ್ರಗತಿಗೆ ಬೇರೆಯವರಿಂದ ದೊರೆತ ನೆರವು ಗಣನೀಯವಾದ್ದು. ಒಂದನೆಯ ಮಹಾಯುದ್ಧ ಮತ್ತು ಅನಂತರದ ಕಾಲದಲ್ಲಿ ಬ್ರಿಟಿಷರೂ ಅಮೆರಿಕ ಸಂಯುಕ್ತಸಂಸ್ಥಾನದವರೂ ಸ್ಥಾಪಿಸಿದ ಕೈಗಾರಿಕೆಗಳಿಂದ ಆ ವರೆಗೂ ಕೇವಲ ಕೃಷಿಪ್ರಧಾನವಾಗಿದ್ದ ಕ್ವಿಬೆಕ್ ಕೈಗಾರಿಕಾ ಪ್ರಗತಿ ಸಾಧಿಸಿತು. 20ನೆಯ ಶತಮಾನದ ಉತ್ತರಾರ್ಧದ ವೇಳೆಗೆ ದೊಡ್ಡ ಕೈಗಾರಿಕೋದ್ಯಮಗಳು ಬೆಳೆದು ಕ್ವಿಬೆಕ್ ಪ್ರಾಂತ್ಯದ ಆರ್ಥಿಕ ರೂಪವೇ ಮಾರ್ಪಾಟುಗೊಂಡಿತ್ತು. ಇದಕ್ಕೆ ಬ್ರಿಟಿಷರು ಬಹಳ ಮಟ್ಟಿಗೆ ಕಾರಣ; ಫ್ರೆಂಚ್ ಮೂಲದವರ ಪಾತ್ರ ಬಹಳ ಕಡಿಮೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಫ್ರೆಂಚ್ ಮೂಲದವರ ಪ್ರಾಬಲ್ಯವೇ ಅಧಿಕವಾಗಿತ್ತು.               										 (ಸಿ.)